Tuesday, May 14, 2024
HomeAuto News2021ರಲ್ಲಿ  ರಸ್ತೆ ಅಪಘಾತದಲ್ಲಿ 1.53 ಲಕ್ಷ ಸಾವು: ಸೀಟ್ ಬೆಲ್ಟ್ ಧರಿಸದಕ್ಕೆ 16 ಸಾವಿರ ಬಲಿ:...

Related Posts

2021ರಲ್ಲಿ  ರಸ್ತೆ ಅಪಘಾತದಲ್ಲಿ 1.53 ಲಕ್ಷ ಸಾವು: ಸೀಟ್ ಬೆಲ್ಟ್ ಧರಿಸದಕ್ಕೆ 16 ಸಾವಿರ ಬಲಿ: ವರದಿ

Dec 31, DTF auto news

ಬೆಂಗಳೂರು: ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ. 2021ರಲ್ಲಿ ದೇಶದಲ್ಲಿ 1.53 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ 16, 397 ಜನರ ಸಾವಿಗೆ ಕಾರಣವಾಗಿರುವುದು ಕಾರಿನಲ್ಲಿ ಪ್ರಯಾಣ ಮಾಡುವಾಗ ಸೀಟ್ ಬೆಲ್ಟ್ (Seat belt) ಧರಿಸದಿರುವುದು!

ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಬಿಡುಗಡೆಗೊಳಿಸಿರುವ ಇತ್ತೀಚಿನ ಮಾಹಿತಿ ಪ್ರಕಾರ,  2021 ರಲ್ಲಿ  ಭಾರತದಲ್ಲಿ 4,12,432 ರಸ್ತೆ ಅಪಘಾತಗಳು ಸಂಭವಿಸಿದ್ದು, 1,53,972 ಜನರು ಸಾವನ್ನಪ್ಪಿದ್ದಾರೆ ಮತ್ತು 3,84,448 ವ್ಯಕ್ತಿಗಳು ಗಾಯಗೊಂಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2021 ರಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಶೇ. 12.6ರಷ್ಟು ಹೆಚ್ಚಾಗಿದೆ. ರಸ್ತೆ ಅಪಘಾತದಲ್ಲಿ ಸಂಭವಿಸಿದ ಸಾವಿನ ಪ್ರಮಾಣ ಶೇ.16.9 ಹಾಗೂ ಗಾಯಗೊಂಡವರ ಪ್ರಮಾಣ ಶೇ. 10.39ರಷ್ಟು ಹೆಚ್ಚಾಗಿದೆ.

ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಬಳಸದ ಕಾರಣ 32,877 ಚಾಲಕರು ಮತ್ತು 13,716 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, 8,438 ಚಾಲಕರು ಮತ್ತು 7,959 ಪ್ರಯಾಣಿಕರು ವಾಹನ ಚಲಾಯಿಸುವಾಗ ಸೀಟ್‌ಬೆಲ್ಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಹಲವು ನಿಯಮಗಳನ್ನು ಜಾರಿಗೊಳಿಸಿದ್ದರೂ, ನಿಯಮ ಪಾಲಿಸದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಒಟ್ಟು ರಸ್ತೆ ಅಪಘಾತಗಳಲ್ಲಿ,  1,28,825 ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎಕ್ಸ್‌ಪ್ರೆಸ್‌ವೇ ಸೇರಿ), 96,382 ರಾಜ್ಯ ಹೆದ್ದಾರಿಗಳಲ್ಲಿ ಮತ್ತು 1,87,225 ಇತರ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸಿವೆ ಎಂದು MORTH ತನ್ನ ವಾರ್ಷಿಕ ವರದಿ ‘ಭಾರತದಲ್ಲಿ ರಸ್ತೆ ಅಪಘಾತಗಳು – 2021’ ರಲ್ಲಿ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ಅಪಘಾತದಲ್ಲಿ 56,007 ಜನರು ಸಾವನ್ನಪ್ಪಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿ 37,963 ಮತ್ತು ಇತರ ರಸ್ತೆಗಳಲ್ಲಿ 60,002 ಸಾವುಗಳು ಸಂಭವಿಸಿವೆ.  ಇದರಲ್ಲಿ ಶೇ.67ರಷ್ಟು 18-45 ವರ್ಷ ವಯಸ್ಸಿನ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

MoRTH ವರದಿಯು ಏಷ್ಯಾ ಪೆಸಿಫಿಕ್ ರಸ್ತೆಯ ಅಡಿಯಲ್ಲಿ ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP) ಅಪಘಾತ ಡೇಟಾ (APRAD) ಮೂಲ ಯೋಜನೆಯಲ್ಲಿ  ಒದಗಿಸಿದ ಮಾಹಿತಿಯನ್ನು ಆಧರಿಸಿದೆ.

2021 ರಲ್ಲಿ ಅತಿ ವೇಗದ ಚಾಲನೆಯಿಂದ 1,07,236 ವ್ಯಕ್ತಿಗಳು ಸಾವನ್ನಪ್ಪಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ 3,314 ಜನರು ಸಾವನ್ನಪ್ಪಿದರು. ರಸ್ತೆಯ ಲೇನ್ ಪಾಲಿಸದೆ 8,122 ಸಾವುಗಳು ಮತ್ತು ಟ್ರಾಫಿಕ್ ಲೈಟ್ಸ್ ಉಲ್ಲಂಘನೆಯಿಂದ 679 ಸಾವುಗಳು ಸಂಭವಿಸಿವೆ. ಚಾಲನೆ ಮಾಡುವಾಗ ಸೆಲ್ ಫೋನ್ ಬಳಸಿ 2,982 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕಾರಣಗಳಿಂದ 31,639 ಸಾವುಗಳು ಸಂಭವಿಸಿವೆ.

ಈ ಅಪಘಾತಗಳಿಗೆ ಮುಖ್ಯವಾಗಿ ಮಾನವ ದೋಷವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಕೆಲವೆಡೆ ರಸ್ತೆ ವಿನ್ಯಾಸದಲ್ಲಿ ಸಂಭವನೀಯ ದೋಷಗಳಾಗಿವೆ. ಈ ವಿಧಾನವು ಸಮಸ್ಯೆಗಳನ್ನು ಪರಿಹರಿಸಲು ರಸ್ತೆ ಎಂಜಿನಿಯರಿಂಗ್ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಲ್ಲಿ ಕೂಡ ಮನುಷ್ಯರ ಯೋಜನಾ ಜಾರಿಯಲ್ಲಿನ ಲೋಪಗಳು ಎದ್ದು ಕಾಣುತ್ತದೆ ಎಂದು ವರದಿ ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ರಸ್ತೆಗಳಲ್ಲಿ ಸಾವನ್ನಪ್ಪಿದ 10 ಜನರಲ್ಲಿ ಒಬ್ಬರಾದರೂ ಭಾರತದವರು.

ಕೇಂದ್ರ ಸರ್ಕಾರ ಕೂಡ ಈ ವರದಿಯ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶಾದ್ಯಂತ ರಸ್ತೆ ಸುರಕ್ಷತೆಯನ್ನು ಬಲಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಸ್ತೆ ಅಪಘಾತ ತಡೆಯುವಲ್ಲಿ ನಾವಿನ್ನೂ ಮಹತ್ವದ ಗುರಿಯನ್ನು ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!